ಗ್ರೀಕ್ ನ್ಯಾಯ

ಮೂರು ಸಾವಿರ ವರ್ಷಗಳಿಗೂ ದೀರ್ಘವಾದ ಇತಿಹಾಸ ಪಡೆದಿರುವ ಗ್ರೀಸ್ ದೇಶ ಪಾಶ್ಚಾತ್ಯ ಸಂಸ್ಕøತಿಯ ತೊಟ್ಟಿಲು ಎಂದು ಪರಿಗಣಿತವಾಗಿದೆ. ಒಂದು ದೇಶದ ಸಂಸ್ಕøತಿಯ ಪ್ರಮುಖ ಲಕ್ಷಣಗಳಲ್ಲಿ ಅದರ ನ್ಯಾಯಸೂತ್ರಗಳೂ ಸೇರಿರುತ್ತವೆ. ಪ್ರಪಂಚದ ಚರಿತ್ರೆಯಲ್ಲಿ ವಿಶಿಷ್ಟವಾದಂಥ ಗುರುಶಿಷ್ಯಪರಂಪರೆಯ-ಸಾಕ್ರಟೀಸ್, ಪ್ಲೇಟೋ, ಆರಿಸ್ಟಾಟಲ್, ಅಲೆಗ್ಸಾಂಡರ್ ಇವರ-ವೈಚಾರಿಕ ಕೊಡುಗೆಗಳಲ್ಲಿ ಗ್ರೀಸ್ ದೇಶದಲ್ಲಿದ್ದ ನ್ಯಾಯದ ರೂಪರೇಷೆಗಳನ್ನು ಕಾಣಬಹುದು. ಅವರಿಗೂ ಹಿಂದಿನ ಕಾಲದ ಗ್ರೀಕ್ ನ್ಯಾಯದ ಸ್ವರೂಪವನ್ನು ಹೋಮರನ ಇಲಿಯಡ್ ಮತ್ತು ಆಡಿಸಿ (ಔಜಥಿsseಥಿ) ಮಹಾಕಾವ್ಯಗಳಿಂದ ತಿಳಿಯಬಹುದು. ವಿಶ್ವದ ಪ್ರಮುಖ ನ್ಯಾಯವ್ಯವಸ್ಥೆಗಳಲ್ಲಿ ಗ್ರೀಕ್ ನ್ಯಾಯವೂ ಒಂದು. ಇದು ಒಂದು ಪ್ರಾಚೀನ ಕುರುಹು ಆಗಿರದೆ ಜೀವಂತ ಸಂಪ್ರದಾಯವಾಗಿದೆ. ಗ್ರೀಕ್ ನ್ಯಾಯದ ಇತಿಹಾಸವನ್ನು ಐದು ಪ್ರಮುಖ ಘಟ್ಟಗಳನ್ನಾಗಿ ಪರಿಗಣಿಸುವುದುಂಟು: 1 ಪ್ರಾಚೀನ ಯುಗ (ಗ್ರೀಸ್ ದೇಶ ರೋಮನ್ ಸಾಮ್ರಾಜ್ಯದ ಪ್ರಾಂತ್ಯವಾಗುವ ವರೆಗೆ), 2 ಹೆಲೆನಿಸ್ಟಿಕ್ ಯುಗ (ಬಿeóÁಂಟಿನ್ ಸಾಮ್ರಾಜ್ಯ ಸ್ಥಾಪನೆಯ ವರೆಗೆ), 3 ಬಿeóÁಂಟಿನ್ ಯುಗ (ಕಾನ್ಸ್‍ಟಾಂಟಿನೋಪಲ್ ನಗರದ ಪತನದ ವರೆಗೆ), 4 ಬಿeóÁಂಟಿನ್ ಅನಂತರದ ಯುಗ (1821ರ ಗ್ರೀಕ್ ಕ್ರಾಂತಿಯ ವರೆಗೆ) ಮತ್ತು 5 ಆಧುನಿಕ ಯುಗ (1821ರ ಗ್ರೀಕ್ ಸ್ವಾತಂತ್ರ್ಯ ಸಮರದಿಂದ ಈಚೆಗೆ).

1 ಪ್ರಾಚೀನ ಯುಗ : ಗ್ರೀಸ್ ದೇಶದ ನಗರರಾಜ್ಯಗಳ ಉದಯದ ಕಾಲದಿಂದ ಗ್ರೀಕ್ ನ್ಯಾಯ ವ್ಯವಸ್ಥಿತವಾಗಿ ಬೆಳೆದಿದೆ. ಅದಕ್ಕೆ ಮುಂಚೆ ಗ್ರೀಕ್ ನ್ಯಾಯಪದ್ಧತಿಗೆ ಪಂಗಡದ ಅಥವಾ ಬುಡಕಟ್ಟಿನ ನಿಯಮಗಳು ಮತ್ತು ಕಟ್ಟಳೆಗಳು ಆಧಾರವಾಗಿದ್ದುವು. ಬಂಧುತ್ವದ ಗುಂಪುಗಳಲ್ಲಿಯ ವ್ಯಾಜ್ಯಗಳನ್ನು ಸಾಧಾರಣವಾಗಿ ಪರಸ್ಪರ ಹೊಂದಾವಣೆಯ ಒಡಂಬಡಿಕೆಗಳ ಮೂಲಕ ಇತ್ಯರ್ಥಗೊಳಿಸಿಕೊಳ್ಳಲಾಗುತ್ತಿತ್ತು. ಪಂಗಡಗಳ ನಾಯಕರು, ರಾಜರು ಆಗಿನ ಕಾಲದಲ್ಲಿ ವ್ಯಾಜ್ಯಗಳನ್ನು ಬಗೆಹರಿಸುತ್ತಿದ್ದರು. ಪಂಗಡಗಳಲ್ಲಿ ಒಮ್ಮತವನ್ನು ಕಾಯ್ದುಕೊಳ್ಳಲು ಮತ್ತು ಪಂಗಡಗಳಲ್ಲಿ ಪರಸ್ಪರ ಸ್ನೇಹ ನಂಬಿಕೆಗಳನ್ನು ಕಾಯ್ದುಕೊಳ್ಳಲು ಏಕರೀತಿಯ ನಿಯಮಗಳನ್ನು ರೂಢಿಸಿಕೊಳ್ಳಬೇಕಾಯಿತು. ಈ ರೀತಿಯ, ರೂಢಿಗತವಾಗಿ ಬಂದ, ನಿಯಮಗಳು ಸಾಧಾರಣವಾಗಿ ಜನಪದ ಸ್ಮøತಿಶಕ್ತಿಯನ್ನವಲಂಬಿಸಿದ್ದುವು. ಅವುಗಳಲ್ಲಿ ಬದಲಾವಣೆಯಾಗಲು ಬಹುಕಾಲ ಬೇಕಾಗುತ್ತಿತ್ತು. ವ್ಯತ್ಯಾಸ ಮಾಡದಿರುವುದಕ್ಕೆ ದೈವ ಭಯವೂ ಒಂದು ಕಾರಣವಾಗಿತ್ತು. ರಾಜರು ವಿವಾದಗಳನ್ನು ನಿರ್ಣಯಿಸುತ್ತಿದ್ದ ರೀತಿಯನ್ನು ಹೋಮರನ ಇಲಿಯಡ್ ಕಾವ್ಯದಲ್ಲಿ ಕಾಣಬಹುದು. ಪಂಗಡಗಳಲ್ಲಿ ನ್ಯಾಯವಿತರಣೆ ಹೆಚ್ಚಾಗಿ ಸ್ವಸಹಾಯ ಮತ್ತು ಜನಬೆಂಬಲವನ್ನವಲಂಬಿಸಿತ್ತು. ಆಪಾದಿತ ತನಗಿದ್ದ ಬಲದ ಮೇಲೆ ವಿವಾದವನ್ನು ಬಗೆಹರಿಸಿಕೊಳ್ಳುತ್ತಿದ್ದ. ಸ್ವಸಹಾಯ ಅಥವಾ ಇತರರ ಬಲವಿಲ್ಲದಿದ್ದಲ್ಲಿ ಅವನು ಓಡಿ ಹೋಗಬೇಕಾಗುತ್ತಿತ್ತು; ಇಲ್ಲವೇ, ತಪ್ಪು ಮಾಡಿರಲಿ ಮಾಡದಿರಲಿ, ತಪ್ಪು ಮಾಡಿದೆನೆಂದು ಒಪ್ಪಿಕೊಳ್ಳಬೇಕಾಗುತ್ತಿತ್ತು. ಕ್ರಿ.ಪೂ. 7ನೆಯ ಶತಮಾನದ ವರೆಗೆ ಕೌಟುಂಬಿಕ ಜೀವನಕ್ಕೆ ಸಂಬಂಧಿಸಿದ ನಿಯಮಗಳಲ್ಲಿ ಯಾವ ಕ್ರಾಂತಿಕಾರಕ ಬದಲಾವಣೆಗಳೂ ಆದಂತೆ ಕಂಡುಬರುವುದಿಲ್ಲ. ಆದರೆ ಖೂನಿ, ಸುಲಿಗೆ, ಕಳವು, ಹಟಸಂಭೋಗ ಮುಂತಾದ ಅನೇಕ ಅಪರಾಧಗಳ ವಿಚಾರಣೆ ಮತ್ತು ದಂಡನೆಗೆ ಸರ್ಕಾರ ಕ್ರಮೇಣ ವ್ಯವಸ್ಥೆ ಮಾಡತೊಡಗಿತು. ನ್ಯಾಯಾಧೀಶರು ನ್ಯಾಯವನ್ನು ನಿರ್ಣಯಿಸುವುದನ್ನು ಬಿಟ್ಟು ಕೇವಲ ಸಂಗತಿಗಳ ಆಧಾರದ ಮೇಲೆ ತೀರ್ಪು ಕೊಡುತ್ತಿದ್ದುದಕ್ಕೆ ಲಿಖಿತ ನ್ಯಾಯಸೂತ್ರಗಳಿಲ್ಲದಿದ್ದುದು ಮತ್ತು ಸಂಪ್ರದಾಯಗಳು ಅಸ್ಪಷ್ಟವಾಗಿದ್ದುದು ಕಾರಣಗಳಾಗಿದ್ದುವು. ಹೊಸ ಸಮಸ್ಯೆಗಳು ಉದ್ಭವಿಸಿದಾಗ ಅಂಥ ಸಂದರ್ಭಗಳಿಗೆ ಅನ್ವಯವಾಗುವ ನ್ಯಾಯಸೂತ್ರಗಳು ಇಲ್ಲದ್ದು ನ್ಯಾಯ ವಿತರಣೆಯಲ್ಲಿಯ ತೊಡಕುಗಳಲ್ಲಿ ಒಂದಾಗಿತ್ತು. ಕ್ರಿ.ಪೂ. 683ರಲ್ಲಿ ಆರು ಸದಸ್ಯರ ಸಮಿತಿಯೊಂದನ್ನು ಸಂಪ್ರದಾಯಗಳ ನಿರ್ಣಯಕಾರರಾಗಿರಲು ನೇಮಿಸಲಾಗಿತ್ತು. ನ್ಯಾಯಾಧೀಶರು ತಾವು ನಿರ್ಧರಿಸಬೇಕಾಗಿದ್ದ ಘಟನೆಗಳಿಗೆ ಅನ್ವಯವಾಗುವ ನ್ಯಾಯಪತ್ರಗಳನ್ನು ಅವರಿಂದ ಪಡೆಯಬೇಕಾಗಿತ್ತು.

ಕ್ರಿ.ಪೂ. 7ನೆಯ ಶತಮಾನದಲ್ಲಿ ಗ್ರೀಸ್ ದೇಶದ ನಗರ ರಾಜ್ಯಗಳು ನ್ಯಾಯ ಸೂತ್ರಗಳನ್ನು ಬರೆಯಿಸಿ ರಚಿಸಲು ಆರಂಭಿಸಿದುವು. ಎಲ್ಲ ನ್ಯಾಯ ಸೂತ್ರಗಳನ್ನೂ ಕ್ರೋಡೀಕರಿಸುವ ಮತ್ತು ಅವನ್ನು ಪ್ರಕಟಿಸುವ ಕಾರ್ಯವನ್ನು ಏಕಸದಸ್ಯ ನ್ಯಾಯ ನಿರ್ಧಾರಕನಿಗೆ (ನೋಮಾಥಿಟೀಸ್) ವಹಿಸಿಕೊಡುವ ಪದ್ಧತಿ ಜಾರಿಗೆ ಬಂತು. ಆ ಕಾಲದ ಕ್ರೋಡೀಕೃತ ಕೃತಿಗಳು ಉಪಲಬ್ಧವಾಗಿಲ್ಲ. ಕೆಲವು ಬಿಡಿಭಾಗಗಳು ಮಾತ್ರ ದೊರಕಿವೆ. ಏನು ಮಾಡಬೇಕು, ಏನು ಮಾಡಬಾರದು, ಮಾಡಬಾರದ್ದನ್ನು ಮಾಡಿದಾಗ ಮತ್ತು ನಿಯಮಗಳನ್ನು ಪಾಲಿಸದಿದ್ದಾಗ ಆ ಬಗ್ಗೆ ಕ್ರಮ ಮತ್ತು ದಂಡಗಳು-ಇವುಗಳ ಬಗ್ಗೆ ವಿವರಗಳು ದೊರೆತಿವೆ. ಈ ಪ್ರಾಚೀನ ಸಂಹಿತೆಗಳು ಧಾರ್ಮಿಕ ಮತ್ತು ವ್ಯಾವಹಾರಿಕ ನಿಯಮಗಳ ಸಂಗ್ರಹಗಳ ರೂಪದಲ್ಲಿರುತ್ತಿದ್ದುವು.
ಪ್ರತಿ ನಗರ ರಾಜ್ಯವೂ ತನ್ನದೇ ಆದ ನ್ಯಾಯಸೂತ್ರಗಳನ್ನು ಮತ್ತು ನ್ಯಾಯಿಕ ವ್ಯವಸ್ಥೆಯನ್ನು ಹೊಂದಿರುತ್ತಿತ್ತು. ಆದ್ದರಿಂದ ಆಗಿನ ಕಾಲದಲ್ಲಿ ಗ್ರೀಕ್ ನ್ಯಾಯವೆಂಬ ಏಕೈಕ ನ್ಯಾಯಿಕ ವ್ಯವಸ್ಥೆ ಇರಲಿಲ್ಲವಾದರೂ ಕ್ರಿ.ಪೂ. 7ರಿಂದ ಕ್ರಿ.ಪೂ. 4ನೆಯ ಶತಮಾನದ ವರೆಗಿನ ಕಾಲದಲ್ಲಿ ನ್ಯಾಯಸೂತ್ರಗಳ ಬೆಳವಣಿಗೆ ಏಕರೂಪದತ್ತ ಸಾಗಿತ್ತು. ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಬೆಳೆದುಬಂದ ಸಾಮಾನ್ಯ ನ್ಯಾಯ ಇಲ್ಲಿ ಬೆಳೆಯಲಿಲ್ಲ. ಅಥೆನ್ಸ್ ನಗರದ ಡ್ರೇಕೋ ಕ್ರಿ.ಪೂ. 621ರ ಸುಮಾರಿಗೆ ಒಂದು ಸಂಹಿತೆಯನ್ನು ಸಿದ್ಧಗೊಳಿಸಿದ್ದ. ಜûಲ್ಯೂಕಸ್ ಸಿದ್ಧಗೊಳಿಸಿದ್ದ ಸಂಹಿತೆ ಲೋಕ್ರಿಸಿನಲ್ಲಿ ಪ್ರಚಲಿತವಿತ್ತು. ಆ ನ್ಯಾಯಸೂತ್ರಗಳು ಸಿಬರಿಸಿನಲ್ಲೂ ಪ್ರಭಾವ ಗಳಿಸಿದ್ದುವು. ಕ್ಯಾಟನಕ್ಕೆ ಅನ್ವಯವಾಗುವಂತೆ ಸಿದ್ಧಗೊಳಿಸಲಾಗಿದ್ದ ನ್ಯಾಯಸೂತ್ರಗಳನ್ನು ಇಟಲಿಯ ಮತ್ತು ಸಿಸಿಲಿಯ ನಗರ ರಾಜ್ಯಗಳೂ ಅಳವಡಿಸಿಕೊಂಡಿದ್ದುವು. ಗ್ರೀಸಿನ ನಗರರಾಜ್ಯಗಳ ನ್ಯಾಯಸೂತ್ರಗಳಲ್ಲಿ-ಅದರಲ್ಲೂ ವಿವಾಹ, ವ್ಯವಹಾರ, ಉತ್ತರಾಧಿಕಾರ, ದತ್ತುಸ್ವೀಕಾರ ಮುಂತಾದವಕ್ಕೆ ಸಂಬಂಧಿಸಿದ ನ್ಯಾಯಸೂತ್ರಗಳಲ್ಲಿ-ಸಾಮ್ಯ ಇತ್ತು. ಆರಿಸ್ಟಾಟಲ್ ಮುಂತಾದವರು ಹೇಳುವಂತೆ ಆಥೆನ್ಸ್ ನಗರರಾಜ್ಯದ ನ್ಯಾಯಸೂತ್ರಗಳು ಬಹು ಮುಖ್ಯವಾದವು.

ಡ್ರೇಕೋಗಿಂತ ಮುಂಚೆ ಕೆಲವೇ ಜನ ಸರ್ಕಾರವನ್ನು ನಡೆಸುತ್ತಿದ್ದರು. ಜನತೆಯ ಬಹುಭಾಗ ಭೂಮಾಲೀಕರ ಪರವಾಗಿ ವ್ಯವಸಾಯ ಮಾಡುತ್ತಿದ್ದ ಜೀತಗಾರರು (ಸಫ್ರ್ಸ್). ಗೇಣಿಯನ್ನು ಸರಿಯಾಗಿ ಕೊಡದಿದ್ದವರನ್ನು ಗುಲಾಮರನ್ನಾಗಿ ಪರಿಗಣಿಸಲಾಗಿತ್ತು. ರಾಜ, ಪಾಲಿಮಾರ್ಕ್ (ದಂಡನಾಯಕ) ಮತ್ತು ಆರ್ಕಾನ್ (ಮುಖ್ಯನ್ಯಾಯಾಧೀಶ) ಇವರು ಕಾಲಾನುಕ್ರಮದಲ್ಲಿ ತೀರ್ಪುಗಳನ್ನು ಕೊಡುತ್ತಿದ್ದರು. ರಾಜಕೀಯ ಸಭೆಗಳಿಗೆ ಸದಸ್ಯರಾಗಿಯೂ ಬರದಿದ್ದವರು ದಂಡ ತೆರಬೇಕಾಗುತ್ತಿತ್ತು. ಭೂಮಿ ಕೆಲವೇ ಜನರ ಸ್ವತ್ತಾಗಿತ್ತು. ಸಾಲ ವ್ಯಕ್ತಿಗತವಾಗಿತ್ತು. ಡ್ರೇಕೋನ ಮೇರೆಗೆ ಆರಿಜಪಗಸ್ ಪರಿಷತ್ತು ಆಗಿನ ನ್ಯಾಯಸೂತ್ರಗಳನ್ನು ರಕ್ಷಿಸಿಕೊಂಡು ಬರುತ್ತಿತ್ತು. ತೀರ್ಪುಗಳನ್ನು ಬಹಿರಂಗವಾಗಿ ಕೊಡುವುದಕ್ಕೆ ಮತ್ತು ಅವನ್ನು ಕಾಪಾಡಿಕೊಂಡು ಬರುವುದಕ್ಕೆ ಥೆಸ್ಮಾಥಿಟೀಸûರನ್ನು (ನ್ಯಾಯ ನಿರ್ಣಯಕಾರರು) ನೇಮಿಸುವ ಪದ್ಧತಿ ರೂಢಿಯಲ್ಲಿತ್ತು.

ಆಗಿನ ನ್ಯಾಯವ್ಯವಸ್ಥೆಗೂ ರಾಜಕೀಯ ಸ್ವರೂಪಕ್ಕೂ ನಿಕಟ ಸಂಬಂಧವಿತ್ತು. ಬಡವರ ಮತ್ತು ಶ್ರೀಮಂತರ ನಡುವೆ ರಾಜಕೀಯ ಹಕ್ಕುಬಾಧ್ಯತೆಗಳಿಗಾಗಿ ಘರ್ಷಣೆ ನಡೆಯುತ್ತಲೇ ಇತ್ತು. ಕೊನೆಗೆ ಉಭಯ ಪಕ್ಷದವರೂ ಸೇರಿ ಮಧ್ಯಸ್ಥ ಮತ್ತು ತೀರ್ಪುಗಾರನನ್ನಾಗಿ ಸೋಲಾನನನ್ನು (ಕ್ರಿ.ಪೂ. ಸು. 639-ಕ್ರಿ.ಪೂ. ಸು. 559) ನೇಮಿಸಿದರು. ಆತ ರೂಪಿಸಿದ್ದ ನ್ಯಾಯಸೂತ್ರಗಳ ರೂಪರೇಷೆಗಳು ಪುರಾತನ ಗ್ರಂಥಗಳಲ್ಲಿ ದೊರೆಯುತ್ತವೆ. ಆತನ ಕಾಲದಲ್ಲಿ ಸ್ವತ್ತಿನ ಆಧಾರದ ಮೇಲೆ ಚುನಾವಣೆಗಳು ನಡೆಯುತ್ತಿದ್ದುವು. ಆಸ್ತಿಯ ಆಧಾರದ ಮೇಲೆ ಸಾಲ ತೆಗೆದುಕೊಳ್ಳಬಹುದಾಗಿತ್ತು. ತನಗೆ ನ್ಯಾಯ ದೊರೆತಿಲ್ಲವೆಂಬ ಕಾರಣದ ಮೇಲೆ ನ್ಯಾಯದರ್ಶಿಗಳ ನ್ಯಾಯಾಲಯಕ್ಕೆ ಮೇಲರ್ಜಿ ಹಾಕಿಕೊಳ್ಳಬಹುದಾಗಿತ್ತು. ಗೌರವಾನ್ವಿತ ವರ್ಗಗಳಿಗೆ ಪ್ರತ್ಯೇಕ ವಿಶೇಷ ನ್ಯಾಯಾಧೀಶರನ್ನು ನೇಮಿಸಲಾಗುತ್ತಿತ್ತು. ಅಪರಾಧವನ್ನವಲಂಬಿಸಿ ದಂಡ ವಿಧಿಸುವುದಕ್ಕಿಂತ ವ್ಯಕ್ತಿಯ ವರ್ಗೀಕರಣದ ಮೇಲೆ ದಂಡ ವಿಧಿಸಲಾಗುತ್ತಿತ್ತು. ಪಿತ್ರಾರ್ಜಿತ ಸ್ವತ್ತಿಗೆ ಸ್ತ್ರೀಪುರುಷರು ವಾರಸುದಾರರಾಗಬಹುದಿತ್ತು. ಕ್ರಿ.ಪೂ. 450ಕ್ಕೆ ಮುಂಚೆ ಉಯಿಲು ಮಾಡುವ ಹಕ್ಕಿಗೆ ನ್ಯಾಯದ ಮನ್ನಣೆ ದೊರೆತಿರಲಿಲ್ಲ. ಹಟಸಂಭೋಗವನ್ನು ಅಪರಾಧವೆಂದು ಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು ಮತ್ತು ಆ ಬಗ್ಗೆ ದಂಡ ವಿಧಿಸಲಾಗುತ್ತಿತ್ತು. ದಂಡ ವ್ಯಕ್ತಿಯ ವರ್ಗೀಕರಣವನ್ನವಲಂಬಿಸಿದಂತೆ, ಸಾಕ್ಷಿಗಳ ಸಂಖ್ಯೆಗೂ ವರ್ಗೀಕರಣ ಆಧಾರವಾಗಿತ್ತು.

ಸೋಲಾನ್ ನರಹತ್ಯೆಗೆ ಸಂಬಂಧಿಸಿದ ನ್ಯಾಯಸೂತ್ರಗಳನ್ನುಳಿದು ಇತರ ನ್ಯಾಯಸೂತ್ರಗಳಲ್ಲಿ ಬದಲಾವಣೆ ಮಾಡಿದ. ಹುಟ್ಟಿನ ಆಧಾರದ ಮೇಲೆ ವ್ಯಕ್ತಿಯ ವರ್ಗೀಕರಣ ಮಾಡುವುದನ್ನು ತಪ್ಪಿಸಿ ಆಸ್ತಿಯ ಆಧಾರದ ಮೇಲೆ ವ್ಯಕ್ತಿಯ ವರ್ಗೀಕರಣ ಮಾಡಿದ. ಆಟಿಕದಲ್ಲಿಯ ಎಲ್ಲ ಸ್ವತಂತ್ರ ವಯಸ್ಕರಿಗೂ ಮತದಾನದ ಹಕ್ಕನ್ನು ನೀಡಲಾಗಿತ್ತು. ಸಾಮಾಜಿಕ ಸ್ಥಾನಮಾನ ಮತ್ತು ಸರ್ಕಾರಿ ಸೇವೆಗಳಲ್ಲಿ ವ್ಯಕ್ತಿಯ ವರ್ಗೀಕರಣ ಮಹತ್ವದ ಪಾತ್ರ ವಹಿಸುತ್ತಿತ್ತು. ಈ ನ್ಯಾಯಸೂತ್ರಗಳು ಹೆಚ್ಚಿನ ಬದಲಾವಣೆಯಿಲ್ಲದೆಯೇ ಪೈಸಿಸ್ಟ್ರೇಟಸ್ (ಮರಣ ಕ್ರಿ.ಪೂ. 57) ಮತ್ತು ಕ್ಲೈಸ್ಥೆನೀಸûರ (ಕ್ರಿ.ಪೂ. 507) ಕಾಲದಲ್ಲಿಯೂ ಜಾರಿಯಲ್ಲಿದ್ದುವು.
ಕ್ರಿ.ಪೂ. 411ಕ್ಕೂ ಮುಂಚೆಯೇ ಕಾನೂನುಗಳನ್ನು ಪ್ರಜಾತಂತ್ರದ ತಳಹದಿಯ ಮೇಲೆ ರೂಪಿಸುವ ಕಾರ್ಯ ಆರಂಭವಾಗಿತ್ತು. ಅಲ್ಲಿಯ ವರೆಗೆ ಯಾವಾಗಲಾದರೊಮ್ಮೆ ಪ್ರಾಸಂಗಿಕವಾಗಿ ಕಾನೂನುಗಳನ್ನು ಮಾಡಲಾಗುತ್ತಿತ್ತು; ಕಾನೂನು ಮಾಡುವುದು ಸರ್ಕಾರದ ನಿಯತ ಚಟುವಟಿಕೆಗಳಲ್ಲಿ ಒಂದಾಗಿರಲಿಲ್ಲ. ಆದರೆ ಜನಸಾಮಾನ್ಯರ ಹಕ್ಕುಬಾಧ್ಯತೆಗಳಿಗೆ ಹೆಚ್ಚು ಹೆಚ್ಚು ಮಾನ್ಯತೆ ದೊರೆತಂತೆಲ್ಲ, ಪ್ರಜಾತಂತ್ರದ ತಳಹದಿ ಭದ್ರವಾದ ಹಾಗೆಲ್ಲ ಆಥೆನ್ಸಿನ ನ್ಯಾಯಸೂತ್ರಗಳಲ್ಲಿ ವರ್ಷ ವರ್ಷಕ್ಕೂ ಬದಲಾವಣೆಯಾದ್ದನ್ನು ಕಾಣಬಹುದು. ವರ್ಷದ ಪ್ರಥಮ ಸಭೆಯಲ್ಲಿ ಇಂಥ ಬದಲಾವಣೆಗಳನ್ನು ಮತಕ್ಕೆ ಹಾಕುವುದರ ಮೂಲಕ ಮಾಡಲಾಗುತ್ತಿತ್ತು. ಸಂದರ್ಭದ ಆವಶ್ಯಕತೆಯನ್ನು ಪೂರೈಸುವ ಕಾನೂನಿನ ಉಪಬಂಧಗಳನ್ನು ಕುರಿತು ಪ್ರಕರಣಪ್ರಕರಣವಾಗಿ ಚರ್ಚಿಸಲಾಗುತ್ತಿತ್ತು. ಕಾನೂನುಗಳ ಅಧಿಕೃತ ಪ್ರತಿಯನ್ನು ಕಲ್ಲಿನ ಮೇಲೆ ಕೆತ್ತಿಸಲಾಗುತ್ತಿತ್ತು. ಕ್ರಿ.ಪೂ. 410-ಕ್ರಿ.ಪೂ. 404ರಲ್ಲಿ ಕೆತ್ತಲಾದ ಕಲ್ಲಿನ ಫಲಕಗಳು ಮತ್ತು ಅದಕ್ಕೂ ಹಿಂದಿನ ಕಾಲದ ಡ್ರೇಕೋನ ಕಾನೂನುಗಳ ಫಲಕಗಳು ದೊರೆತಿವೆ. ಆಥೆನ್ಸಿನ ಕಾನೂನುಗಳು ಸರಳ ಭಾಷೆಯಲ್ಲಿದ್ದುವು. ಸಂದರ್ಭಗಳ ಆಧಾರದ ಮೇಲೆ ರಚಿತವಾಗಿದ್ದು ಇವು ವಿಶಿಷ್ಟ ಘಟನೆಯನ್ನು ಕುರಿತ ನ್ಯಾಯದ ವಿವೇಚನೆ ಇರುತ್ತಿತ್ತು. ಪ್ರಕ್ರಿಯಾನಿಯಮಗಳು ಹಲವು ಸಲ ನಿರ್ದಿಷ್ಟ ರೂಪದಲ್ಲಿ ಇರುತ್ತಿರಲಿಲ್ಲ; ಸಂಕ್ಷಿಪ್ತವಾಗಿಯೂ ಇರುತ್ತಿದ್ದುವು. ಒಮ್ಮೊಮ್ಮೆ ಬಹಳ ವಿವರವಾಗಿರುತ್ತಿದ್ದದ್ದೂ ಉಂಟು. ದಂಡಾಪರಾಧಿಗಳಿಗೆ ವಿಧಿಸಲಾಗುತ್ತಿದ್ದ ದಂಡಗಳು ಬಹಳ ಕಠೋರವಾಗಿದ್ದುವು. ವಿವಿಧ ದಂಡಗಳಲ್ಲಿ ಮರಣದಂಡನೆಯೂ ಒಂದಾಗಿತ್ತು.
ಗ್ರೀಕ್ ನ್ಯಾಯವ್ಯವಸ್ಥೆಯಲ್ಲಿ ಕ್ರಿ.ಪೂ. 4ನೆಯ ಶತಮಾನಕ್ಕೆ ಮುಂಚೆಯೇ ವಿವಾದಗಳ ವರ್ಗೀಕರಣ ಇದ್ದದ್ದನ್ನು ನೋಡಬಹುದು. ಸಾಧಾರಣವಾಗಿ ವಿವಾದಗಳನ್ನು ಮೂರು ಭಾಗಗಳಾಗಿ ವಿಂಗಡಿಸಲಾಗುತ್ತಿತ್ತು : 1 ವಿಶೇಷ ವಿವಾದಗಳು, 2 ಡಿಕಾಯ್ ಅಥವಾ ಖಾಸಗಿ ವಿವಾದಗಳು, 3 ಗ್ರಾಫಯ್ ಅಥವಾ ಸಾರ್ವತ್ರಿಕ ವಿವಾದಗಳು.

ವಿಶೇಷ ವಿವಾದಗಳನ್ನು ಮಹಾಪರಾಧಗಳನ್ನಾಗಿ ಪರಿಗಣಿಸಲಾಗುತ್ತಿತ್ತು. ರಾಜ್ಯ ವಿರೋಧಿ ಅಪರಾಧಗಳು, ರಾಜದ್ರೋಹಕ್ಕೆ ಸಂಬಂಧಿಸಿದ ಅಪರಾಧಗಳು, ಸರ್ಕಾರ ಅಥವಾ ಸೇನೆಗೆ ಎಸಗಿದ ವಿಶ್ವಾಸಘಾತಕ ಕೃತ್ಯಗಳು, ವೈರಿ ಸರ್ಕಾರ ಅಥವಾ ಸೇನೆಯ ಜೊತೆಗೆ ಇರಿಸಿಕೊಂಡಿದ್ದ ಗುಪ್ತ ವ್ಯವಹಾರಗಳು-ಇವೇ ಮುಂತಾದವು ಮಹಾಪರಾಧಗಳಾಗಿದ್ದುವು. ಇವಕ್ಕೆ ದಂಡಗಳನ್ನು ನಿಗದಿಗೊಳಿಸಲಾಗಿತ್ತು. ಸಂದರ್ಭಾನುಗುಣವಾಗಿ ಕಠೋರ ಇಲ್ಲವೆ ಸಾಮಾನ್ಯ ದಂಡಗಳನ್ನು ಹಾಕಲಾಗುತ್ತಿತ್ತು. ದುಷ್ಟ ಅಪರಾಧಿಗಳನ್ನು ವಿಚಾರಣೆಗೆ ಮುನ್ನ ಕಾರಾಗೃಹದಲ್ಲಿಡಲಾಗುತ್ತಿತ್ತು. ದಂಡದ ಮೊತ್ತ ಮತ್ತು ಅಪರಾಧದ ಘೋರತನವನ್ನು ಲಕ್ಷ್ಯದಲ್ಲಿಟ್ಟು ಪರಿಷತ್ತಿಗೆ ಅಥವಾ ಸಭೆಗೆ ವಿಚಾರಣೆಗಾಗಿ ವರ್ಗಾಯಿಸಲಾಗುತ್ತಿತ್ತು.

ಖಾಸಗಿ ವಿವಾದಗಳನ್ನು ನರಹತ್ಯೆಗೆ ಸಂಬಂಧಿಸಿದ ವಿವಾದಗಳು ಮತ್ತು ವ್ಯವಹಾರ ದಾವೆಗಳು ಎಂದು ವಿಂಗಡಿಸಬಹುದಾಗಿತ್ತು. ನರಹತ್ಯೆಗೆ ಸಂಬಂಧಿಸಿದ ನ್ಯಾಯಸೂತ್ರಗಳಲ್ಲಿ ಸ್ವಸಹಾಯ, ಬಲಾಬಲಗಳ ಪಾತ್ರ ಪ್ರಮುಖವಾಗಿತ್ತು. ತಂದೆ, ಸಹೋದರ, ಮಗ ಅಥವಾ ಮೃತನ ಇತರ ಸಂಬಂಧಿಕರು ಫಿರ್ಯಾದಿಗಳಾಗಬಹುದಿತ್ತು. ಡ್ರೇಕೋನ ಕಾಲಕ್ಕಾಗಲೇ ಉದ್ದೇಶಿತ ಕೊಲೆ ಮತ್ತು ಇತರ ರೀತಿಯ ಕೊಲೆಗಳಲ್ಲಿಯ ವ್ಯತ್ಯಾಸವನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಉದ್ದೇಶಿತ ಕೊಲೆಯ ವಿವಾದದ ಇತ್ಯರ್ಥವನ್ನು ಆರಿಜಪೆಗಸಿನ ಸರ್ವಸದಸ್ಯರ ಸಭೆ ಮಾಡುತ್ತಿತ್ತು. ಸಾಧಾರಣ ರೀತಿಯ ಅಪರಾಧಗಳನ್ನು 51 ಜನ ಸದಸ್ಯರು ವಿಚಾರಣೆ ಮಾಡುತ್ತಿದ್ದರು. ಉದ್ದೇಶಿತ ಕೊಲೆಗೆ ಸಾಮಾನ್ಯವಾಗಿ ಮರಣದಂಡನೆ ಅಥವಾ ದೇಶೋಚ್ಚಾಟನೆಯ ಶಿಕ್ಷೆ ವಿಧಿಸಲಾಗುತ್ತಿತ್ತು.
ವ್ಯವಹಾರ ದಾವೆಗಳನ್ನು ಸಂಬಂಧಪಟ್ಟವರು ಅಥವಾ ಅವರ ವಿಧಿಮಾನ್ಯ ಪ್ರತಿನಿಧಿಗಳು ಹಾಕಬಹುದಾಗಿತ್ತು. ಇತರ ಅನೇಕ ರೀತಿಯ ದಾವೆಗಳನ್ನು ಮಧ್ಯಸ್ಥರು ನಿರ್ಣಯ ಮಾಡುತ್ತಿದ್ದರು. ಪಂಚನಾಗಲು ನಿರಾಕರಿಸುವುದಕ್ಕೆ ರಾಜಕಾರ್ಯದ ಹೊರತು ಅನ್ಯಥಾ ಕಾರಣದಿಂದ ಸಾಧ್ಯವಿರಲಿಲ್ಲ. ಸಾರ್ವತ್ರಿಕ ವಿವಾದಗಳಿಗೂ ವ್ಯವಹಾರ ದಾವೆಗಳಿಗೂ ಹೆಚ್ಚಿನ ಭೇದವಿರಲಿಲ್ಲ, ಸಾರ್ವತ್ರಿಕ ವಿವಾದಗಳು ಸಾಮಾನ್ಯವಾಗಿ ಸಾಮಾಜಿಕ ಅಥವಾ ಧಾರ್ಮಿಕ ಜೀವನಕ್ಕೆ ಸಂಬಂಧಪಟ್ಟ ವಿವಾದಗಳಾಗಿರುತ್ತಿದ್ದುವು. ನ್ಯಾಯಾಧೀಶರು ವಕೀಲರಾಗಿರಬೇಕಾಗಿರಲಿಲ್ಲ. ಯಾರೂ ವಕೀಲರನ್ನು ನೇಮಿಸಿಕೊಳ್ಳಬೇಕಾಗಿರಲಿಲ್ಲವೆಂಬುದು ಪ್ರಾಚೀನ ಗ್ರೀಕ್ ನ್ಯಾಯವ್ಯವಸ್ಥೆಯ ಮುಖ್ಯ ಲಕ್ಷಣಗಳಲ್ಲಿ ಒಂದು. ವಿವಾದ ಉದ್ಭವಿಸಿದಾಗ ಗ್ರೀಕರು ಹೊಡೆದಾಡುತ್ತಿರಲಿಲ್ಲ. ನ್ಯಾಯಾಲಯಕ್ಕೆ ಹೋಗುವುದು ಸಾಮಾನ್ಯವಾಗಿತ್ತು. ವೃತ್ತಿಯಿಂದ ವಕೀಲರಲ್ಲದವರೂ-ಸರ್ವರೂ-ವಕೀಲರೆಂಬುದು ಗ್ರೀಕರ ಹೆಮ್ಮೆಯಾಗಿತ್ತು. ನ್ಯಾಯಾಧಿಕರಣದ (ಟ್ರಿಬ್ಯೂನಲ್) ಸದಸ್ಯರ ಸಂಖ್ಯೆ 201 ರಿಂದ 2,500ರ ವರೆಗೆ ಇರುತ್ತಿತ್ತು. ಆರಿಜಪೆಗಸಿನ ಸದಸ್ಯರ ಸಂಖ್ಯೆ 220 ಇರುತ್ತಿತ್ತು. ಸಾಕ್ಷ್ಯವನ್ನು ವಿವೇಚಿಸುವುದು ನ್ಯಾಯದರ್ಶಿಗಳ ಕಾರ್ಯವಾಗಿತ್ತು. ಪ್ರಮಾಣದ ಮೇಲೆ ಸಾಕ್ಷ್ಯವನ್ನು ಸ್ವೀಕರಿಸಲಾಗುತ್ತಿತ್ತು. ನರಹತ್ಯದ ಅಪರಾಧದ ಸಂಬಂಧದಲ್ಲಿ ಗುಲಾಮರು, ಹುಡುಗರು ಮತ್ತು ಹೆಂಗಸರ ಸಾಕ್ಷ್ಯವನ್ನು ಸ್ವೀಕರಿಸಲಾಗುತ್ತಿತ್ತು. ಕ್ರಿ.ಪೂ. 403ರ ವರೆಗೆ ವಾದ ಮೌಖಿಕವಾಗಿರುತ್ತಿತ್ತು. ಅದರೆ ಮೇಲರ್ಜಿ ಹಾಕಬೇಕಾಗಿದ್ದ ಸಂದರ್ಭದಲ್ಲಿ ವಾದ ಲಿಖಿತರೂಪದಲ್ಲಿರುತ್ತಿತ್ತು. ವ್ಯಾವಹಾರಿಕ ವಿವಾದವನ್ನು ಯಾವಾಗ ಬೇಕಾದರೂ ಹಿಂತೆಗೆದುಕೊಳ್ಳಬಹುದಿತ್ತು. ವ್ಯಾಜ್ಯಗಳ ಸಂಬಂಧದಲ್ಲಿ ನ್ಯಾಯಾಲಯಕ್ಕೆ ಶುಲ್ಕ ಸಂದಾಯ ಮಾಡಬೇಕಾಗುತ್ತಿತ್ತು. ನ್ಯಾಯಾಲಯದಲ್ಲಿ ಗುಮಾಸ್ತರು ಇರುತ್ತಿದ್ದರು ಮತ್ತು ಅವರು ವಾದಿ-ಪ್ರತಿವಾದಿಗಳ ಮತ್ತು ಇತರರ ಉಲ್ಲೇಖಗಳನ್ನು ಓದಿ ಹೇಳುತ್ತಿದ್ದರು. ಸಾಕ್ಷಿಗಳು ಹಾಜರಿರಲು ಮತ್ತು ಸಾಕ್ಷ್ಯಕ್ಕೆ ಸಂಬಂಧಿಸಿದ ಕಾಗದಪತ್ರಗಳನ್ನು ಹಾಜರುಪಡಿಸಲು ಒತ್ತಾಯಪಡಿಸಬಹುದಾಗಿತ್ತು.

ಕ್ರಿ.ಪೂ. 329 ರಿಂದ ಕ್ರಿ.ಪೂ. 322ರ ವರೆಗಿನ ಅವಧಿಯಲ್ಲಿ ಆರಿಸ್ಟಾಟಲ್ ಆಥೆನ್ಸಿನ ಸಂವಿಧಾನವನ್ನು ಬರೆದಿರಬಹುದಾಗಿದೆ. ಸಮಾಜದಲ್ಲಿಯ ಆಂತರಿಕ ಸಂಬಂಧಕ್ಕೆ ಜನತೆಯೇ ಹೊಣೆಯೆಂಬ ಸೋಲಾನನ ಉಕ್ತಿ ಆಥೆನ್ಸಿನ ಜನಮನದಲ್ಲಿ ನೆಲೆನಿಂತಿತಷ್ಟೇ ಅಲ್ಲ, ಅನಂತರದ ಪೀಳಿಗೆಯಲ್ಲೂ ರಕ್ತಗತವಾಗಿದ್ದನ್ನು ಆರಿಸ್ಟಾಟಲನ, ಇತರರ ಗ್ರಂಥಗಳಿಂದ ತಿಳಿಯಬಹುದು. ಕೆಲವೇ ಜನ ನ್ಯಾಯಶಾಸ್ತ್ರ ಪಂಡಿತರ ಕೈಯಲ್ಲಿ ನ್ಯಾಯವ್ಯವಸ್ಥೆಯ ಹೊಣೆಯನ್ನು ವಹಿಸಿಕೊಂಡುದನ್ನು ಅಲ್ಲಿಯ ಜನ ಬಯಸಲಿಲ್ಲ. ಆದ್ದರಿಂದ ರೋಮನ್ ನ್ಯಾಯದಂತೆ ಗ್ರೀಕ್ ನ್ಯಾಯತಜ್ಞರ ಕೈಗೂಸಾಗಿ ಉಳಿಯದೆ ಸಾಮಾನ್ಯ ಜನತೆಯ ವಿವೇಕದ ಪ್ರತಿರೂಪವಾಗಿ ಬೆಳೆಯಿತು.

2 ಹೆಲೆನಿಸ್ಟಿಕ್ ಯುಗ : ಕ್ರಿ.ಪೂ. 146-ಕ್ರಿ.ಶ. 565. ಕ್ರಿ.ಪೂ. 1ನೆಯ ಶತಮಾನದ ಮುಕ್ತಾಯದ ವೇಳೆಗೆ ಗ್ರೀಕ್ ನಗರರಾಜ್ಯಗಳು ರೋಮನ್ ಸಮ್ರಾಜ್ಯದ ಭಾಗಗಳಾಗಿದ್ದವು. ಅನೇಕ ಶತಮಾನಗಳ ವರೆಗೆ ಈ ಭೂಭಾಗದಲ್ಲಿ ರೋಮನ್ ಮತ್ತು ಗ್ರೀಕ್ ನ್ಯಾಯಸೂತ್ರಗಳು ಪರಸ್ಪರ ಪೂರಕವಾಗಿ ಬೆಳೆದವು. ಕ್ರಿ.ಶ 212ರಲ್ಲಿ ರೋಮನ್ ಸಾಮ್ರಾಜ್ಯದ ಸಮಸ್ತ ಜನರಿಗೂ ನಾಗರಿಕ ಹಕ್ಕುಬಾಧ್ಯತೆಗಳು ದೊರೆತಮೇಲೆ ರೋಮನ್ ಮತ್ತು ಗ್ರೀಕ್ ನ್ಯಾಯಸೂತ್ರಗಳಲ್ಲಿ ಹೆಚ್ಚಿನ ಒಡಂಬಡಿಕೆ ತಲೆದೋರಹತ್ತಿತು. ಎರಡೂ ನ್ಯಾಯವ್ಯವಸ್ಥೆಗಳ ಸಂಮಿಶ್ರ ಸ್ವರೂಪದ ನ್ಯಾಯಸೂತ್ರಗಳು ಆಚರಣೆಯಲ್ಲಿ ಬರಹತ್ತಿದವು. ಜಸ್ಟಿನಿಯನನ ನ್ಯಾಯಸುತ್ರಗಳು ಗ್ರೀಕಿಗೆ ಭಾಷಾಂತರವಾದುವು. ಇವು ಮತ್ತು ಗ್ರೀಕರ ಪ್ರಾಚೀನ ನ್ಯಾಯಸೂತ್ರಗಳು ಪರಸ್ಪರ ಹೊಂದಾಣಿಕೆಯಾಗುವಂತೆ ಮಾರ್ಪಾಡು ಹೊಂದಿದುವು. ರೋಮನರು ರಾಜಕೀಯವಾಗಿ ಗ್ರೀಸ್ ದೇಶವನ್ನು ವಶಪಡಿಸಿಕೊಂಡಿದ್ದರೂ ಗ್ರೀಕರ ಬಗ್ಗೆ ಅವರಿಗೆ ವೈಷಮ್ಯವಿರಲಿಲ್ಲ. ಅಲ್ಲದೆ ಗ್ರೀಕರ ಕಲೆ, ವೈಚಾರಿಕ ಪ್ರಜ್ಞೆ, ಸಾಹಿತ್ಯ ಇವುಗಳ ಬಗ್ಗೆ ಅವರಿಗೆ ಆದರವಿತ್ತು. ಅಂತೆಯೇ ಗ್ರೀಕ್ ನ್ಯಾಯ ಮತ್ತು ಸಂಸ್ಕøತಿಗಳು ಉಳಿದುಕೊಂಡವು.

3 ಬಿeóÁಂಟಿನ್ ಯುಗ: 565-1453. ಬಿeóÁಂಟಿನ್ ಚಕ್ರಾಧಿಪತ್ಯದ ಕಾಲದಲ್ಲಿ ನ್ಯಾಯಸೂತ್ರಗಳನ್ನು ಗ್ರೀಕ್ ಭಾಷೆಯಲ್ಲಿ ಬರೆಯಲಾಗುತ್ತಿತ್ತು. ಎಕ್ಲೋಗ ಲೀಗಂ ಎಂಬ ನ್ಯಾಯಸಂಹಿತೆ 3ನೆಯ ಲಿಯೋ ಚಕ್ರವರ್ತಿಯಿಂದ (717-740) ಮಂಜೂರಾತಿ ಪಡೆದಿತ್ತು. ಈ ಕಾಲದ ಗ್ರೀಕ್ ನ್ಯಾಯವನ್ನು ರೋಮನರ ಸಂಪ್ರದಾಯ ಬದ್ಧತೆ, ಕ್ರೈಸ್ತ ಧರ್ಮದ ನೀತಿ ಮತ್ತು ಗ್ರೀಕರ ನ್ಯಾಯಿಕವಿವೇಚನೆ ಇವುಗಳ ತ್ರಿವೇಣೀಸಂಗಮವೆಂದು ಹೇಳಬಹುದು. ಈ ಕಾರಣದಿಂದಾಗಿ ಪೂರ್ವ ಐರೋಪ್ಯ ದೇಶಗಳಲ್ಲಿ ಮತ್ತು ಬಾಲ್ಕನ್ ದೇಶಗಳಲ್ಲಿ ಬಿeóÁಂಟಿನರ ಕಾಲದ ನ್ಯಾಯಸೂತ್ರಗಳ ಪ್ರಭಾವ ಬಿತ್ತು.

ಒಂಬತ್ತನೆಯ ಕಾನ್ಸ್ಟಂಟೈನ್ 1045ರ ಸುಮಾರಿಗೆ ಕಾನ್ಸ್ಟಾಂಟಿನೋಪಲಿನಲ್ಲಿ ಒಂದು ನ್ಯಾಯಶಾಸ್ತ್ರಶಾಲೆ ಆರಂಭಿಸಿದ. ಈ ಕಾಲದಲ್ಲಿ ನ್ಯಾಯಸೂತ್ರಗಳು, ನ್ಯಾಯವ್ಯವಸ್ಥೆ ಮತ್ತು ನ್ಯಾಯವಿತರಣೆಗಳನ್ನು ಕುರಿತು ಕೆಲವು ಸಂಗ್ರಹಗಳು ಪ್ರಕಟವಾದವು ಮತ್ತು ಗ್ರೀಕರ ಪುರಾತನ ಸಂಪ್ರದಾಯಗಳು ಮತ್ತು ಚರ್ಚಿನ ಕಾನೂನುಗಳು ಹೊರಬಂದವು.

4 ಬಿeóÁಂಟಿನ್ ಅನಂತರದ ಯುಗ : 1453-1821. ಕಾನ್ಸ್ಟಾಂಟಿನೋಪಲಿನ ಪತನ (1453), ಬಿeóÁಂಟಿನ್ ಸಾಮ್ರಾಜ್ಯದ ಅಂತ್ಯ, ತುರ್ಕರ ವಿಜಯ ಇವು ಗ್ರೀಕ್ ನ್ಯಾಯದ ಇತಿಹಾಸದಲ್ಲಿ ನಾಲ್ಕನೆಯ ಘಟ್ಟಕ್ಕೆ ಎಡೆಮಾಡಿಕೊಟ್ಟವು. ತುರ್ಕರ ನ್ಯಾಯ ಅತಿಧಾರ್ಮಿಕ ಸ್ವರೂಪದ್ದಾದ ಕಾರಣ ಅವರ ಗ್ರೀಕರ ನ್ಯಾಯವನ್ನು ವ್ಯಕ್ತಿಗತ ನ್ಯಾಯವನ್ನಾಗಿ ಪರಿಗಣಿಸಿದರು. ಸ್ಥಳೀಯ ಆಂತರಿಕ ವ್ಯವಹಾರವನ್ನು ಗ್ರೀಕರಿಗೆ ಬಿಟ್ಟುಕೊಟ್ಟಿದ್ದ ಕಾರಣ ಗ್ರೀಕ್ ನ್ಯಾಯ ಬೆಳೆಯಲವಕಾಶವಾಯಿತು. ಕಾಜಿಗಳು ಮುಸ್ಲಿಂ ಪ್ರಜೆಗಳಿಗೆ ಇಸ್ಲಾಮೀ ನ್ಯಾಯವನ್ನು ಮತ್ತು ಗ್ರೀಕ್ ಪ್ರಜೆಗಳಿಗೆ ಅವರ ವೈಯಕ್ತಿಕ ನ್ಯಾಯವನ್ನು ಅನ್ವಯ ಮಾಡುತ್ತಿದ್ದರು. ಥೆಸಲೋನಿಕದ ಒಬ್ಬ ನ್ಯಾಯಮೂರ್ತಿಯಾಗಿದ್ದ ಹಾರ್ಮೆನೊಪ್ಯುಲಾಸ್ 1345ರಲ್ಲಿ ಗ್ರೀಕೊ-ರೋಮನ್ ಅಥವಾ ಬಿeóÁಂಟಿನ್ ನ್ಯಾಯವನ್ನು ಆರು ಪುಸ್ತಕಗಳಲ್ಲಿ ಸಂಗ್ರಹಿಸಿ ಬರೆದ ಹೆಕ್ಸಬಿಬ್ಲಾಸ ಎಂಬುದು ಆಗ ಆಧಾರಗ್ರಂಥವಾಗಿತ್ತು. ಗ್ರೀಕರು ತಮ್ಮ ವಿವಾದಗಳನ್ನು ಕಾಳಜಿಗಳ ನ್ಯಾಯಾಲಯಗಳಿಗೆ ಸಾಮಾನ್ಯವಾಗಿ ತೆಗೆದುಕೊಂಡು ಹೋಗುತ್ತಿರಲಿಲ್ಲ. ಈ ಕಾರಣದಿಂದ ಸ್ಥಳೀಯ ಪ್ರಾಧಿಕಾರಕ್ಕೊಳಪಟ್ಟು ನ್ಯಾಯಾಲಯಗಳು, ಬಿಷಪ್ಪರ ನ್ಯಾಯಾಲಯಗಳು ಮತ್ತು ಕಾನ್ಸ್ಟಾಂಟಿನೋಪಲಿನ ಪೇಟ್ರಿಯಾರ್ಕ್ ನ್ಯಾಯಾಲಯ-ಇವು ಅಸ್ತಿತ್ವಕ್ಕೆ ಬಂದವು.

5 ಆಧುನಿಕ ಯುಗ : 1821ರ ಕ್ರಾಂತಿ ಗ್ರೀಕ್ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಒಂದು ಹೊಸ ಯುಗಕ್ಕೆ ನಾಂದಿಯಾಯಿತು. 1822 ಜನವರಿ 1 ರಂದು ಎಪಿಡಾರಸಿನಲ್ಲಿ ಸೇರಿದ್ದ ಕ್ರಾಂತಿಕಾರಿ ಸಭೆ ಫ್ರಾನ್ಸಿನಲ್ಲಿ ಘೋಷಿಸಲಾದ ಮಾನವ ಹಕ್ಕುಗಳ ಆಧಾರದ ಮೇಲೆ ರೂಪುಗೊಂಡ ಸ್ವತಂತ್ರ ಹಾಗೂ ಪ್ರಜಾಸತ್ತತ್ಮಕ ಸ್ವರೂಪದ ಸಂವಿಧಾನವನ್ನು ಅಂಗೀಕರಿಸಿತು. ಪರಮಾಧಿಕಾರವುಳ್ಳ ಸಂಸತ್ತನ್ನು ಸ್ಥಾಪಿಸುವ ಸಂವಿಧಾನ 1823ರಲ್ಲಿ ಅಸ್ತಿತ್ವಕ್ಕೆ ಬಂತು. ಆದರೆ ಟಾಯಿ eóÉೀನದಲ್ಲಿ ಅಂಗೀಕರೀಸಲಾದ ಮೂರನೆಯ ಸಂವಿಧಾನದ ಮೇರೆಗೆ ಕಾರ್ಯಪಲಿಕಾಧಿಕಾರವನ್ನು ಕ್ಯಾಪೊಡಿಸ್ಟ್ರೆಯಾಸನಿಗೆ ವಹಿಸಿಕೊಡಲಾಯಿತು. ಈತ ತನ್ನ ಅಧಿಕಾರ ಚಲಾವಣೆಯ ನೆಪದಲ್ಲಿ ಸಂಸತ್ತನ್ನು ರದ್ದುಗೊಳಿಸಿದ. 1831ರ ವರೆಗೆ ರಾಜ್ಯಭಾರ ನಡೆಸಿದ. ಜನತೆಗೆ ಇವನ ಬಗ್ಗೆ ಗೌರವವಿರಲಿಲ್ಲ. ಹೀಗಾಗಿ ಇವನ ಕೊಲೆಯಾಯಿತು. ಗ್ರೀಸಿನಲ್ಲಿ ಸ್ವಲ್ಪ ಕಾಲ ಅರಾಜಕತೆಯಿತ್ತು. ರಾಜಕುಮಾರ ಓತೋ ಪ್ರಾಪ್ತವಯಸ್ಕನಾಗಿ ರಾಜನಾಗಿ ಬಂದಮೇಲೆ ಅರಾಜಕತೆ ಕಡಿಮೆಯಾಗಹತ್ತಿತ್ತು. ಆತನ ಸರ್ವಾಧಿಕಾರವೂ ಜನಕ್ಕೆ ಹಿತವೆನಿಸಲಿಲ್ಲ. 1844ರಲ್ಲಿ ಕ್ರಾಂತಿಯಾಗಿ ಫ್ರೆಂಚರ 1830ರ ಪ್ರಣಾಳಿಕೆಯ ಮಾದರಿಯ ಸಂವಿಧಾನ ಆಚರಣೆಗೆ ಬಂತು. 1862ರಲ್ಲಾದ ಮತ್ತೊಂದು ಕ್ರಾಂತಿಯ ಫಲವಾಗಿ ಓತೋ ಅಧಿಕಾರ ಕಳೆದುಕೊಂಡ. ಎರಡು ವರ್ಷಗಳ ಅನಂತರ 1ನೆಯ ಜಾರ್ಜ್ ಹೊಸ ಪ್ರಜಾಸತ್ತಾತ್ಮಕ ಸಂವಿಧಾನವನ್ನು ಘೋಷಿಸಿದ. ಈ ಸಂವಿಧಾನದ ಮೇರೆಗೆ ರಾಜಕೀಯ ಪರಮಾಧಿಕಾರ ಜನತೆಗೆ ಸೇರಿದ್ದು, ಶಾಸನವನ್ನು ಮಾಡುವ ಅಧಿಕಾರ ರಾಜ ಮತ್ತು ಸಂಸತ್ತುಗಳಲ್ಲಿ ನಿಹಿತವಾಗಿತ್ತು. ಮತಹಕ್ಕು ಪುರುಷರಿಗೆ ಪ್ರಥಮವಾಗಿ ದೊರೆತದ್ದು, ರಹಸ್ಯಮತದಾನ-ಇವು ಈ ಸಂವಿಧಾನದ ಪ್ರಮುಖ ಲಕ್ಷಣಗಳು.

1911ರಲ್ಲಾದ ಶಾಂತಿಯುತ ಮತ್ತು ರಕ್ತಹಿತ ಕ್ರಾಂತಿಯ ಪರಿಣಾಮವಾಗಿ ಸಂವೈಧಾನಿಕ ಬದಲಾವಣೆಗಳಾದವು. ಸ್ವಲ್ಪ ಕಾಲ 1864ರ ಸಂವಿಧಾನ ಆಚರಣೆಯಲ್ಲಿತ್ತು. ಒಂದನೆಯ ಮಹಾಯುದ್ಧದ ಕಾಲದಲ್ಲಿ ಸಂವಿಧಾನವನ್ನು ಹಲವು ಸಲ ಸ್ಥಗಿತಗೊಳಿಸಲಾಗಿತ್ತು. 1927ರಲ್ಲಿ ರಾಜ ಮನೆತನದ ಅಧಿಕಾರವನ್ನು ರದ್ದುಗೊಳಿಸಲಾಯಿತು. ಅದರೆ 1935ರಲ್ಲಿ ರಾಜಮನೆತನದ ಅಧಿಕಾರ ಮತ್ತು ಹಿಂದಿನ ಸಂವಿಧಾನ ಮತ್ತೆ ಅಸ್ತಿತ್ವಕ್ಕೆ ಬಂದವು.

ಎರಡನೆಯ ಮಹಾಯುದ್ಧನಂತರ 1952ರಲ್ಲಿ ಹೊಸ ಸಂವಿಧಾನ ಕಾರ್ಯ ರೂಪಕ್ಕೆ ಬಂತು. 1967ರಲ್ಲಿ ಮಿಲಿಟರಿ ಕ್ರಾಂತಿಯಾಯಿತು. ಅದರಿಂದಾಗಿ 1952ರ ಸಂವಿಧಾನದ ಬಹುಭಾಗವನ್ನು ಸ್ಥಗಿತಗೊಳಿಸಲಾಯಿತು. ಇನ್ನೊಂದು ಸಂವಿಧಾನವನ್ನು ಸಿದ್ಧಗೊಳಿಸಲು ಒಂದು ತಜ್ಞರ ಸಮಿತಿಯನ್ನು ನೇಮಿಸಲಾಯಿತು. ಆ ಸಮಿತಿಯವರು ಸಿದ್ಧಗೊಳಿಸಿದ ಸಂವಿಧಾನವನ್ನು 1968ರ ಸೆಪ್ಟೆಂಬರ್ 29ರಂದು ಜನಮತಗಣನೆಯ ಮೂಲಕ ಅಂಗೀಕರಿಸಲಾಯಿತು. ಸಂವೈಧಾನಿಕ ಪರಿಮಿತ ರಾಜ ಪ್ರಭುತ್ವ ಹಾಗೂ ಸಂಸತ್ತಿನ ಅಧಿಕಾರ, ವ್ಯಕ್ತಿಸ್ವಾತಂತ್ರ್ಯ, ಬಂದಿಪ್ರತ್ಯಕ್ಷೀಕರಣ, ಶಾಸನ ದೃಷ್ಟಿಯಲ್ಲಿ ಸಮಾನತೆ ಮುಂತಾದವು ಇದರ ಮುಖ್ಯ ಲಕ್ಷಣಗಳು. ದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಲಾಗುವ ವಿದೇಶೀ ಹಣಕ್ಕೆ ಭದ್ರತೆ, ವಕೀಲ, ವೈದ್ಯಕ ವೃತ್ತಿಗಳು ನಾಗರಿಕರಿಗೆ ಮಾತ್ರ ಮೀಸಲು ಎಂಬ ಉಪಬಂಧಗಳು ಇದರಲ್ಲಿವೆ. ಈಚೆಗೆ ಗ್ರೀಸ್ ಗಣರಾಜ್ಯವಾಗಿದೆ.

ಗ್ರೀಕ್ ದಿವಾಣಿ ಸಂಹಿತೆಗೆ ಬಿeóÁಂಟಿನ್ ಸಮ್ರಾಟರ ಕಾನೂನುಗಳು ಆಧಾರವಾಗಿದ್ದುವು. ಆದರೆ 1827ರ ಸಂವಿಧಾನದಲ್ಲಿ ಫ್ರೆಂಚ್ ನ್ಯಾಯದ ಆಧಾರದ ಮೇಲೆ ಮುಂದಿನ ಸಂಹಿತೆಯನ್ನು ರೂಪಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಮಾಡಲಾಗಿತ್ತು. ಗ್ರೀಸಿನಲ್ಲಿ 1804ಕ್ಕಿಂತಲೂ ಮುಂಚಿನಿಂದಲೇ ಫ್ರೆಂಚ್ ನ್ಯಾಯಸೂತ್ರಗಳ ಪ್ರಭಾವ ಇತ್ತು. ಫ್ರೆಂಚ್ ವಾಣಿಜ್ಯ ಸಂಹಿತೆ ಗ್ರೀಕ್ ಭಾಷೆಗೆ ಅನುವಾದಗೊಂಡು ಅಲ್ಲೂ ಆಚರಣೆಗೆ ಬಂತು. 1823ರಲ್ಲಿ ಫ್ರೆಂಚ್ ದಂಡಸಂಹಿತೆಯ ಆಧಾರದ ಮೇಲೆ ದಂಡ ಸಂಹಿತೆಯನ್ನು ರಚಿಸಲಾಯಿತು. ಇತರ ವಿಷಯಗಳಲ್ಲಿ ಬಿeóÁಂಟಿನ್ ಕಾನೂನುಗಳು ಆಚರಣೆಯಲ್ಲಿದ್ದುವು.

ಓತೋ ದೊರೆಯ ಕಾಲದಲ್ಲಿ ಜಿ.ಎಲ್. ಮೌರರನ ನೇತೃತ್ವದಲ್ಲಿ ಫ್ರೆಂಚ್ ಮತ್ತು ಬವೆರೀಯನ್ ಮಾದರಿಯಲ್ಲಿ ನಾಲ್ಕು ಸಂಹಿತೆಗಳನ್ನು ತಯಾರಿಸಲಾಯಿತು. ಇವುಗಳ ಪೈಕಿ ವ್ಯವಹಾರ ಸಂಹಿತೆ ಹಲವಾರು ತಿದ್ದುಪಡಿಗಳೊಡನೆ 20ನೆಯ ಶತಮಾನದ ಉತ್ತರಾರ್ಧದ ವರೆಗೆ ಆಚರಣೆಯಲ್ಲಿತ್ತು. ಹಾಗೆಯೇ ದಂಡಸಂಹಿತೆ ಮತ್ತು ದಂಡಪ್ರಕ್ರಿಯಾಸಂಹಿತೆಗಳೂ ಆಚರಣೆಯಲ್ಲಿದ್ದುವು.
ಗ್ರೀಕ್ ನ್ಯಾಯದ ಕ್ರೋಡೀಕರಣ ಕಾರ್ಯದಲ್ಲಿ 1922ರ ಅನಂತರ ಹೆಚ್ಚಿನ ಕಾರ್ಯ ನಡೆದಿದೆ ಎನ್ನಬಹುದು. 1922ರಲ್ಲಿ ಸಿದ್ಧಗೊಳಿಸಲಾದ ಕರಡು ಹಾಗೆಯೇ ಉಳಿಯಿತು. 1930ರಲ್ಲಿ ಒಂದು ಸಮಿತಿಯನ್ನು ನೇಮಿಸಲಾಯಿತು. ಈ ಸಮಿತಿಯವರು 1937ರಲ್ಲಿ ಕೆಲವು ಕರಡುಪತ್ರಗಳನ್ನು ಪ್ರಕಟಿಸಿದರು. ಈ ಕರಡುಗಳನ್ನು ಸಮನ್ವಯಗೊಳಿಸಲು ಜಿ. ವೇಲ್ಸನ್ನು ನೇಮಿಸಲಾಯಿತು. 1940ರಲ್ಲಿ ದಿವಾಣಿ ಸಂಹಿತೆ ಸಿದ್ಧವಾಯಿತು. ಇದು 1941ರ ಜುಲೈ ತಿಂಗಳಲ್ಲಿ ಆಚರಣೆಯಲ್ಲಿ ಬರಬೇಕಾಗಿತ್ತು. ಆದರೆ ವಿದೇಶಿ ಸೇನೆಯ ಆಕ್ರಮಣಕ್ಕೆ ದೇಶ ಒಳಗಾಯಿತು. ದೇಶ ಸ್ವತಂತ್ರವಾದ ಮೇಲೆ 1945ರಲ್ಲಿ ಒಂದು ಹೊಸ ಸಂಹಿತೆಯನ್ನು ಜಾರಿಗೆ ತಂದರೂ 1946ರಲ್ಲಿ ಹಿಂದಿನ 1940ರ ಸಂಹಿತೆಯನ್ನು ಆಚರಣೆಗೆ ತರಲಾಯಿತು.
ಗ್ರೀಸಿನ ಆಧುನಿಕ ನ್ಯಾಯವನ್ನು ದಿವಾಣಿ ಸಂಹಿತೆ, ವಾಣಿಜ್ಯ ಸಂಹಿತೆ, ದಂಡ ಸಂಹಿತೆ, ವ್ಯವಹಾರ ಪ್ರಕ್ರಿಯಾ ಮತ್ತು ದಂಡ ಪ್ರಕ್ರಿಯಾ ಸಂಹಿತೆಗಳು, ಸಾಮಾಜಿಕ ಸುಧಾರಣಾ ಕಾನೂನುಗಳು ಹಾಗೂ ಅಂತರಾಷ್ಟ್ರೀಯ ವೈಯಕ್ತಿಕ ಮತ್ತು ಸಾಮಾನ್ಯ ನ್ಯಾಯ ಎಂಬುದಾಗಿ ವಿಂಗಡಿಸಬಹುದು. ದಿವಾಣಿ ಸಂಹಿತೆಯಲ್ಲಿ ಸಾಮಾನ್ಯ ತತ್ತ್ವಗಳು, ಕರಾರುಗಳಿಗೆ ಅನ್ವಯಿಸುವ ನ್ಯಾಯ ಸೂತ್ರಗಳು. ಸ್ವತ್ತಿಗೆ ಸಂಬಂಧಿಸಿದ ನ್ಯಾಯಸೂತ್ರಗಳು, ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದ ನ್ಯಾಯ ಸೂತ್ರಗಳು ಮತ್ತು ಉತ್ತರಾಧಿಕಾರ ಎಂಬ 5 ಭಾಗಗಳಿವೆ.

ಪ್ರಥಮ ಭಾಗದಲ್ಲಿ ದಿವಾಣಿ ನ್ಯಾಯದ ಸಾಮಾನ್ಯ ತತ್ತ್ವಗಳನ್ನು ವಿವೇಚಿಸುವಲ್ಲಿ ನ್ಯಾಯದ ಸಾಮಾನ್ಯ ಲಕ್ಷಣಗಳು, ವ್ಯಕ್ತಿ ಮತ್ತು ವಿಧಿಬದ್ಧ ವ್ಯಕ್ತಿ, ವಿಧಿಬದ್ಧವಲ್ಲದ ಮತ್ತು ವಿವಜ್ರ್ಯ ಕ್ರಿಯೆಗಳು, ಸರ್ವಸಮಾನತೆಯ ಆಧಾರದ ಮೇಲೆ ವಿವಾದಗಳನ್ನು ನಿರ್ಧರಿಸಲು ನ್ಯಾಯಾಧೀಶರಿಗೆ ಕೊಡಲಾಗಿರುವ ಅಧಿಕಾರ, ಸ್ವರಕ್ಷಣೆ, ಸ್ವಸಹಾಯ ಮುಂತಾದವುಗಳ ಬಗ್ಗೆ ಮತ್ತು ಕರಾರುಗಳ ಬಗ್ಗೆ ಹೇಳಲಾಗಿದೆ. ಎರಡನೆಯ ಭಾಗದಲ್ಲಿ ಕರಾರುಗಳನ್ನು ಕುರಿತ ನ್ಯಾಯದ ವಿವರಣೆ ಇದೆ. ಸ್ವತ್ತಿನ ವಿಕ್ರಯದ ತತ್ತ್ವಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಕರಾರುಗಳನ್ನು ಕಾರ್ಯರೂಪಕ್ಕೆ ತರುವುದನ್ನು ವಿವರಿಸಲಾಗಿದೆ. ಸ್ಥಿರಸ್ವತ್ತಿನ ವಿಕ್ರಯ, ಒಡೆತನದ ಹಸ್ತಾಂತರ ಇವುಗಳ ಬಗ್ಗೆಯೂ ಈ ಭಾಗದಲ್ಲಿ ಹೇಳಲಾಗಿದೆ. ವ್ಯವಹಾರಾಪಕೃತ್ಯದ ಬಗೆಗಿನ ಉಪಬಂಧಗಳೂ ಈ ಭಾಗದಲ್ಲಿವೆ.
ಸ್ವತ್ತನ್ನು ಕುರಿತ, ಎಂದರೆ ಸ್ವಾಧೀನತೆ ಮತ್ತು ಒಡೆತನ ಇವುಗಳ ಸಂಬಂಧದ ನ್ಯಾಯಸೂತ್ರಗಳು, ಸ್ವತ್ತು ಸಂಗ್ರಹಣೆಯ ವಿವಿಧರೀತಿಗಳು, ಸ್ವತ್ತಿಗೆ ಸಂಬಂಧವಿರುವ ಹಕ್ಕುಬಾಧ್ಯತೆಗಳು, ಒತ್ತೆ ಮುಂತಾದವುಗಳಿಗೆ ಸಂಬಂಧಿಸಿದ ಉಪಬಂಧಗಳು ಮೂರನೆಯ ಭಾಗದಲ್ಲಿವೆ. ನಾಲ್ಕನೆಯ ಭಾಗದಲ್ಲಿ ವಿವಾಹ ನಿಶ್ಚಿತಾರ್ಥ, ವಿವಾಹ, ತಂದೆ ತಾಯಿ ಮಕ್ಕಳ ಪರಸ್ಪರ ಸಂಬಂಧ, ಔರಸತ್ವ, ಪಾಲಕರ ಕರ್ತವ್ಯಗಳು ಇವೇ ಮುಂತಾದ ವಿಷಯಗಳಿಗೆ ಅನ್ವಯಿಸುವ ನ್ಯಾಯಸೂತ್ರಗಳು ಇವೆ.
ಉತ್ತರಾಧಿಕಾರಕ್ಕೆ ಸಂಬಂಧವಿರುವ ಉಪಬಂಧಗಳು ಐದನೆಯ ಭಾಗದಲ್ಲಿವೆ. ಇಚ್ಛಾಪತ್ರಮೂಲವಾದ ಉತ್ತರಾಧಿಕಾರ, ಇಚ್ಛಾಪತ್ರಹೀನ ಉತ್ತರಾಧಿಕಾರ, ಬಲವಂತದ ಉತ್ತರಾಧಿಕಾರ-ಹೀಗೆ ಮೂರು ರೀತಿಯ ಉತ್ತರಾಧಿಕಾರ ನಿಯಮಗಳಿವೆ.
ವಾಣಿಜ್ಯಕ್ಕೆ ಸಂಬಂಧಿಸಿದ 1804ರ ಫ್ರೆಂಚ್ ಮಾದರಿಯ ವಾಣಿಜ್ಯ ಸಂಹಿತೆ 1821ರ ವರೆಗೆ ಆಚರಣೆಯಲ್ಲಿತ್ತು. 1878ರ ವರೆಗೆ ಹೆಚ್ಚು ಬದಲಾವಣೆಗಳು ಆಗಲಿಲ್ಲ. 1878ರಲ್ಲಿ ದಿವಾಳಿತನಕ್ಕೆ ಸಂಬಂಧಿಸಿದ ಕಾನೂನು ಬದಲಾಯಿತು. ಹಾಗೆಯೇ 1958ರಲ್ಲಿ ಹೊಸ ಸಾಮುದ್ರವಿಧಿಗಳು ಆಚರಣೆಯಲ್ಲಿ ಬಂದವು. ಇವಲ್ಲದೆ ಅನೇಕ ಆಧುನಿಕ ಕಾನೂನುಗಳು ಜಾರಿಗೆ ಬಂದಿವೆ. ವಿಮಾ ಉದ್ಯಮವನ್ನು ನಿಗಮಗಳು ಮಾತ್ರ ನಡೆಯಿಸಬಹುದು. ಈ ವ್ಯವಹಾರ ಸರ್ಕಾರದ ನಿಯಂತ್ರಣಕ್ಕೊಳಪಟ್ಟಿರುತ್ತದೆ.
1834ರ ದಿವಾಣಿ ಸಂಹಿತೆಗೆ ಅನೇಕ ಬಾರಿ ತಿದ್ದುಪಡಿ ಮಾಡಲಾಗಿದೆ. ಎಲ್ಲ ದಿವಾಣಿ ವಿವಾದಗಳಲ್ಲಿ ಮೌಖಿಕ ವಾದ ಮತ್ತು ಪ್ರತಿವಾದಗಳಿಗೆ ಅವಕಾಶ ಉಂಟು. ಮ್ಯಾಜಿಸ್ಟ್ರೇಟರ ನ್ಯಾಯಾಲಯದ, ಮೂಲಾಧಾರವಿರುವ ನ್ಯಾಯಾಧೀಶರ ನ್ಯಾಯಾಲಯದ, ಅಪೀಲು ನ್ಯಾಯಾಲಯಗಳ, ಆರಿಜಪಗಸ್ ಎಂಬ ಶ್ರೇಷ್ಠ ನ್ಯಾಯಾಲಯದ ವ್ಯವಸ್ಥೆಯಿದೆ. 1968ರಲ್ಲಿ ಹೊಸ ದಿವಾಣಿ ಸಂಹಿತೆ ಆಚರಣೆಗೆ ಬಂತು. ನ್ಯಾಯಾಲಯದ ಸುಧಾರಣೆ ಮತ್ತು ಪ್ರಕ್ರಿಯೆಯ ಸುಧಾರಣೆ ಈ ಹೊಸ ಸಂಹಿತೆಯ ಉದ್ಧೇಶ.
ದಂಡಸಂಹಿತೆ ಮತ್ತು 1834ರ ದಂಡ ಪ್ರಕ್ರಿಯಾಸಂಹಿತೆಗಳಿಗೆ ಬದಲಾಗಿ 1951ರಲ್ಲಿ ಹೊಸ ಸಂಹಿತೆಗಳು ಜಾರಿಗೆ ಬಂದವು. ಹಿಂದಿನ ಅನುಭವ ಇದರಲ್ಲಿ ವ್ಯಕ್ತವಾಗಿದೆ. ಕಾನೂನುಬಾಹಿರವಾಗಿ ಯಾವ ದಂಡವನ್ನೂ ವಿಧಿಸಲಾಗುವುದಿಲ್ಲ ಎಂಬ ತತ್ತ್ವವನ್ನು ದಂಡಸಂಹಿತೆಯಲ್ಲಿ ಅಳವಡಿಸಲಾಗಿದೆ. ಅಪರಾಧಗಳ ವರ್ಗೀಕರಣ ಮುಂತಾದ ವಿಷಯಗಳನ್ನು ಪ್ರತಿಪಾದಿಸಲಾಗಿದೆ. ಅಪರಾಧಗಳನ್ನು ಮತ್ತು ದಿವಾಣಿ ವಿವಾದಗಳನ್ನು ಒಬ್ಬನೇ ನ್ಯಾಯಾಧೀಶ ಬಗೆಹರಿಸಬಹುದು. ಘೋರ ಅಪರಾಧಗಳನ್ನು ತಡೆಯಲು ಜಾಹೀರುಮಾಡುವ ವಿಧಾನವನ್ನು ದಂಡಪ್ರಕ್ರಿಯಾ ಸಂಹಿತೆಯಲ್ಲಿ ಅಳವಡಿಸಲಾಗಿದೆ. ಬಾಲಾಪರಾಧ, ಮನೋರೋಗಿಗಳ ಅಪರಾಧಗಳು ಮುಂತಾದ ವಿಷಯಗಳು ಇದರಲ್ಲಿವೆ.

1909ರ ಶಾಂತಿಯುತ ಕ್ರಾಂತಿ ಸಾಮಾಜಿಕ ಕಾನೂನುಗಳ ದೃಷ್ಟಿಯಿಂದ ಒಂದು ಹೊಸ ಯುಗಕ್ಕೆ ನಾಂದಿಯಾಯಿತು. ಕಾರ್ಮಿಕ ಹಿತರಕ್ಷಣೆಯ ದಿಶೆಯಲ್ಲಿ ಅನೇಕ ಕಾನೂನುಗಳು ಜಾರಿಗೆ ಬಂದಿವೆ. ಕೆಲಸದ ಸ್ಥಳ, ವಾರ್ಷಿಕ ಬಿಡುವು, ಕೂಲಿ ಇವುಗಳ ಸಂಬಂಧದಲ್ಲಿ ಸುಧಾರಣೆಗಳು ಆಗಿವೆ. 1920ರಿಂದ ಈಚೆಗೆ ಮತ್ತಷ್ಟು ಸುಧಾರಣೆಗಳು ಆಗಿವೆ. ಕೆಲಸದಿಂದ ತೆಗೆದು ಹಾಕುವುದು, ಪರಿಹಾರ ನೀಡಿಕೆ, ಕಾರ್ಮಿಕ ಮಧ್ಯಸ್ಥ ನಿರ್ಣಯ ಹಾಗೂ ಸಾಮಾಜಿಕ ಭದ್ರತೆ, ಕಾರ್ಮಿಕರ ಪರಿಹಾರ-ಹೀಗೆ ಅನೇಕ ವಿಷಯಗಳ ಬಗ್ಗೆ ಕಾನೂನುಗಳು ಇವೆ.

ದಿವಾಣಿಸಂಹಿತೆಯಲ್ಲಿ ಅಂತರಾಷ್ಟ್ರೀಯ ವೈಯಕ್ತಿಕ ನ್ಯಾಯಕ್ಕೆ ಸಂಬಂಧಿಸಿದ ಉಪಬಂಧಗಳಿವೆ. ಯಾವೊಂದೂ ವಿವಾದಕ್ಕೆ ಗ್ರೀಕ್ ಕಾನೂನುಗಳು ಅನ್ವಯವಾಗಬೇಕೆ, ಇಲ್ಲವೆ ಇತರ ದೇಶಗಳ ಕಾನೂನುಗಳು ಅನ್ವಯವಾಗಬೇಕೆ ಎಂಬುದಕ್ಕೆ ಆಯಾ ದೇಶಗಳೊಂದಿಗೆ ಗ್ರೀಕ್ ದೇಶ ಮಾಡಿಕೊಂಡಿರುವ ಒಪ್ಪಂದ ಆಧಾರವಾಗಿರುತ್ತದೆ. ಹೆಚ್ಚಾಗಿ ಒಂದೇ ದೇಶದ ಕಾನೂನುಗಳು ಅನ್ವಯವಾಗುವುದಕ್ಕೆ ಅವಕಾಶವಿದೆ. ಗ್ರೀಕ್ ದೇಶವಾಸಿ ಮತು ಪ್ರಜೆ ಎಂಬ ಆಧಾರದ ಮೇಲೆ ಅಂತರಾಷ್ಟ್ರೀಯ ವೈಯಕ್ತಿಕ ನ್ಯಾಯವನ್ನು ಅನ್ವಯಿಸಲಾಗುತ್ತದೆ. ರಾಜ್ಯರಹಿತರಾಗಿದ್ದವರಿಗೆ ವಾಸದ ನಿಮಿತ್ತ ಕೆಲವು ಹಕ್ಕುಬಾಧ್ಯತೆಗಳು ದೊರಕುತ್ತವೆ. 1955ರಲ್ಲಿ ಹೊಸ ಗ್ರೀಕ್ ಪ್ರಜೆತನದ ಸಂಹಿತೆ ಆಚರಣೆಯಲ್ಲಿ ಬಂತು. ಅದರಲ್ಲಿ ಪ್ರಜೆತನವನ್ನು ಹೇಗೆ ಪಡೆಯಬಹುದು ಮತ್ತು ಕಳೆದುಕೊಳ್ಳಬಹುದು ಎಂಬುದನ್ನು ಹೇಳಲಾಗಿದೆ. ಕೆಲವೊಂದು ಸಂಧರ್ಭಗಳಲ್ಲಿ ಗ್ರೀಕ್ ಸ್ತ್ರೀಪ್ರಜೆ ಬೇರೆ ರಾಷ್ಟ್ರದ ಪ್ರಜೆಯೊಂದಿಗೆ ವಿವಾಹವಾದರೂ ತನ್ನ ಗ್ರೀಕ್ ಪ್ರಜೆತನವನ್ನು ಉಳಿಸಿಕೊಳ್ಳಬಹುದು. ವಿದೇಶಿಯರಿಗೂ ಮತ್ತು ಶಾಸನ ದೃಷ್ಟಿಯಲ್ಲಿ ಸಮಾನತೆಯ ಹಕ್ಕು ಕೊಡಲಾಗಿದೆ. ಕಾನೂನು ಮತ್ತು ವೈದ್ಯವೃತ್ತಿಗಳನ್ನು ಗ್ರೀಕ್ ಪ್ರಜೆಗಳಿಗೆ ಮಾತ್ರ ಕಾಯ್ದಿರಿಸಲಾಗುತ್ತದೆ.

ಅಂತರಾಷ್ಟ್ರೀಯ ಸಾರ್ವತ್ರಿಕ ನ್ಯಾಯದ ಸಾಮಾನ್ಯ ನಿಯಮಗಳನ್ನು ದೇಶದ ಇತರ ಕಾನೂನುಗಳಂತೆ ಪರಿಗಣಿಸಲಾಗುತ್ತದೆ. ವಿದೇಶಗಳೊಂದಿಗೆ ಮಾಡಿಕೊಂಡ ಮತ್ತು ಅಂತರಾಷ್ಟ್ರೀಯ ಒಡಂಬಂಡಿಕೆಗಳು ಕಾನೂನು ರೂಪದಲ್ಲಿ ಆಚರಣೆಗೆ ಬರಬೇಕಾದರೆ ಸಂಸತ್ತಿನಿಂದ ಆ ಬಗ್ಗೆ ಶಾಸನವಾಗಬೇಕಾಗಿದೆ.

ಗ್ರೀಸ್ ಅನೇಕ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆದಿದೆ. ವಿದೇಶಗಳೊಂದಿಗೆ ಸಾರಿಗೆ ಸಂಪರ್ಕಗಳನ್ನು ಹೊಂದಿರುವುದು ಜೊತೆಗೆ ಅನೇಕ ದೇಶಗಳೊಂದಿಗೆ ಪರಸ್ಪರವಾಗಿ ವಾಣಿಜ್ಯ ಮುಂತಾದ ಒಪ್ಪಂದಗಳನ್ನು ಮಾಡಿಕೊಂಡಿದೆ. ಪರರಾಷ್ಟ್ರಗಳೊಂದಿಗೆ ರಾಜಕೀಯ ಸಂಬಂಧಗಳನ್ನು ಇಟ್ಟುಕೊಂಡಿದೆ. ಹೀಗೆ ಆಧುನಿಕ ಅಂತರಾಷ್ಟ್ರೀಯ ನ್ಯಾಯ ಗ್ರೀಕ್ ನ್ಯಾಯದ ಮೇಲೆ ಪ್ರಭಾವ ಬೀರುತ್ತಿದೆ. ಇದೇ ರೀತಿ ನ್ಯಾಯದ ಇತಿಹಾಸ ಅಂತರಾಷ್ಟ್ರೀಯ ನ್ಯಾಯದ ಇತಿಹಾಸದ ಮೇಲೆ ಪ್ರಭಾವ ಬೀರಿದೆ. ಪ್ರಜಾತಂತ್ರ ಸ್ವರೂಪದ ಸರ್ಕಾರ, ಮಧ್ಯಸ್ತಿಕೆಯ ಮೂಲಕ ವಿವಾದಗಳನ್ನು ಇತ್ಯರ್ಥಗೊಳಿಸುವ ವಿಧಾನ ಮುಂತಾದ ಕೊಡುಗೆಗಳ ಮೂಲಕ ತನ್ನ ವಿಶಿಷ್ಟತೆಯನ್ನು ಎತ್ತಿ ತೋರಿಸುತ್ತದೆ.							(ಎಲ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ